ಆತ್ಮಪ್ರತ್ಯಯ
ಈ ಪದಕ್ಕೆ ಆತ್ಮಪ್ರತಿಷ್ಠೆ ಎಂಬ ಅರ್ಥಕಲ್ಪನೆಗೂ ಅವಕಾಶವಿದೆ. ಸ್ವಾವಲಂಬನೆ, ಸ್ವತಂತ್ರವಾದ ಆಲೋಚನೆ, ಸ್ವಪ್ರಯತ್ನದಲ್ಲಿ ನಂಬಿಕೆ, ಎಂಬ ಅರ್ಥಕಲ್ಪನೆಗೂ ಅವಕಾಶವಿದೆ. ಈ ಭಿನ್ನ ಅರ್ಥಗಳ ಆಧಾರದ ಮೇಲೆ ಭಿನ್ನ ಮತ ತತ್ತ್ವಗಳೂ, ಭಿನ್ನ ನೀತಿತತ್ತ್ವಗಳೂ, ಭಿನ್ನ ರಾಷ್ಟ್ರತತ್ತ್ವಗಳೂ ಏರ್ಪಟ್ಟಿವೆ. ಈ ಎರಡೂ ವ್ಯಕ್ತಿತ್ವಕ್ಕೆ ಪ್ರಾಶಸ್ತ್ಯ ಕೊಡುತ್ತವೆಯಾದರೂ ನಾವು ಬೆಳೆಸಬೇಕಾದ ವ್ಯಕ್ತಿತ್ತ್ವ ಎಂಥದ್ದು, ಯಾವ ವಿಧವಾದ ವ್ಯಕ್ತ್ವಿತ್ವವನ್ನು ಬೆಳೆಸಿಕೊಡುವುದೇ ನಿಜವಾದ ಆತ್ಮ ಸಿದ್ಧಿ ಎಂಬುದು ಒಂದು ಮುಖ್ಯ ಪಕ್ಷ. ಈ ಎರಡು ಪಂಥಗಳು ಭಾರತದಲ್ಲೂ ಪಾಶ್ಚಾತ್ಯ ದೇಶಗಳಲ್ಲೂ ತುಂಬ ಹಿಂದಿನ ಕಾಲದಿಂದ ಬೆಳೆದು ಬಂದಿವೆ. ಅಭ್ಯುದಯ ಮತ್ತು ನಿಶ್ರೇಯಸ ಒಂದಕ್ಕೊಂದು ವಿರುದ್ಧವಲ್ಲ. ಇವೆರಡರ ಸಮನ್ವಯ ಸಾಧ್ಯ. ಇಂಥ ಸಮನ್ವಯದಿಂದಲೇ ನಿಜವಾದ ಆತ್ಮಸಿದ್ಧಿ ಎಂಬುದು ಭಾರತೀಯರಿಗೂ ಪಾಶ್ಚಾತ್ಯರಿಗೂ ಸರ್ವಸಾಧಾರಣವಾದ ಪಂಥ. ಹಾಗೆಯೇ ರಾಜಕೀಯದಲ್ಲೂ ವ್ಯಕ್ತಿಸ್ವಾತಂತ್ರ್ಯವಾದ (ಇಂಡಿವಿಜುಯಲಿಸಂ) ಮತ್ತು ಸಮಾಜವಾದ (ಸೋಷಿಯಲಿಸಂ) ಎಂಬ ಎರಡು ತೀರ ವಿರುದ್ಧ ಪಂಥಗಳೂ ಅವೆರಡನ್ನೂ ಸಮನ್ವಯ ಮಾಡಲೆತ್ನಿಸುವ ಮಧ್ಯಮಾರ್ಗದ ಪಂಥಗಳು ಇವೆ. ಸಮಾಜದ ಭದ್ರತೆ ಎಷ್ಟು ಮುಖ್ಯವೂ ಅದರ ವ್ಯಕ್ತಿಸ್ವಾತಂತ್ರ್ಯವೂ ಅಷ್ಟೇ ಮುಖ್ಯ. ಕೆಲವು ವೇಳೆ ಇವೆರಡಕ್ಕೂ ವಿರೋಧ ಕಂಡುಬಂದರೂ ಇವು ಒಂದಕ್ಕೊಂದು ಪೋಷಕವಾಗಬೇಕೆಂಬುದೇ ಎರಡರ ಗುರಿ. ಆ ಗುರಿಯೇ ಇವೆರಡರ ಬೆಲೆಯನ್ನು ನಿರ್ಧರಿಸುವ ಪ್ರಮಾಣ.  	

(ಜಿ.ಎಚ್.)